ಡೀಷಾನ್
ಪೂರ್ವ ಫ್ರಾನ್ಸಿನ ಒಂದು ನಗರ. ಕೋಟ್-ಡಾರ್ ಆಡಳಿತ ವಿಭಾಗದ (ಡಿಪಾರ್ಟ್‍ಮೆಂಟ್) ಮುಖ್ಯ ಪಟ್ಟಣ. ಬರ್ಗಂಡೀಯನ್ ಪ್ರಸ್ಥಭೂಮಿಯ ಬುಡದಲ್ಲಿ ಊಷ್ ನದಿಯ ದಡದಲ್ಲಿ ಪ್ಯಾರಿಸಿನಿಂದ ಆಗ್ನೇಯಕ್ಕೆ 208 ಮೈ. ದೂರದಲ್ಲಿ ಉ.ಅ. 47ಲಿ 19' 19" ಮತ್ತು ಪೂ.ರೇ. 5ಲಿ 2' 16" ಮೇಲೆ ಇದೆ. ಜನಸಂಖ್ಯೆ 1,45,357 (1968).

	ಡೀಷಾನ್ ಹಳೆಯ ನಗರದ ಸುತ್ತ ಹೊಸ ಉಪನಗರಗಳು ತಲೆಯೆತ್ತಿವೆಯಾದರೂ ಹಳೆಯ ನಗರವೇ ಇಂದಿಗೂ ವಾಣಿಜ್ಯಕೇಂದ್ರವಾಗಿದೆ. ಇಕ್ಕಟ್ಟಾದ ಇಬ್ಬದಿಯಲ್ಲೂ 15ನೆಯ ಶತಮಾನದ ಮರದ ಮನೆಗಳನ್ನು ಕಾಣಬಹುದು. ಅವುಗಳ ಜೊತೆಜೊತೆಗೇ ಅನಂತರದ ಶತಮಾನದ ಮನೆಗಳೂ ಇವೆ. ಸೇಂಟ್ ಬಿನೈನ್ ಕತೀಡ್ರಲ್ (14ನೆಯ ಶತಮಾನ) ಸೇಂಟ್ ಫಿಲಿಬರ್ಟ್ ಚರ್ಚ್ (16ನೆಯ ಶತಮಾನ) ನಾಟರ್‍ಡ್ಯಾಮ್ ಚರ್ಚ್, ಸೇಂಟ್ ಮೀಷೆಲ್ ಚರ್ಚ್ ಇವು ಕೆಲವು ಪ್ರಮುಖ ಕಟ್ಟಡಗಳು. ಹಿಂದೆ ಜೆಸ್ಯೂಟ್ ಚರ್ಚ್ ಆಗಿದ್ದ ಕಟ್ಟಡ ಈಗ ನಗರ ಗ್ರಂಥಾಲಯವಾಗಿದೆ. ಇದೂ ಕಾರ್ಮೆಲೈಟ್ ಚರ್ಚೂ ಸೇಂಟ್ ಆನ್ ಆರಾಧನ ಮಂದಿರವೂ 17ನೆಯ ಶತಮಾನದ ಧಾರ್ಮಿಕ ವಾಸ್ತುವಿನ ಮಾದರಿಗಳು. ಬರ್ಗಂಡಿಯ ಡ್ಯೂಕರ ಅರಮನೆಯಾಗಿದ್ದ ಭವ್ಯಕಟ್ಟಡ ಇರುವುದು ಹಳೆಯ ನಗರದ ಮಧ್ಯದಲ್ಲಿ. ಇದು 14, 15ನೆಯ ಶತಮಾನಗಳಲ್ಲಿ ನಿರ್ಮಾಣವಾಗಿ 17, 18ನೆಯ ಶತಮಾನದಲ್ಲಿ ವಿಸ್ತøತವಾಯಿತು. ಡ್ಯೂಕರ ಅರಮನೆಯ ಕಟ್ಟಡದ ದಕ್ಷಿಣಕ್ಕೆ ಇರುವುದು ಪ್ಯಾಲೇ ಡ ಜಸ್ಟಿಸ್. ಬರ್ಗಂಡಿಯ ಪಾರ್ಲಿಮೆಂಟ್ 16ನೆಯ ಶತಮಾನದಲ್ಲಿ ಸೇರುತ್ತಿದ್ದದ್ದು ಇಲ್ಲಿ. ಪುರಾತತತ್ವ ವಸ್ತುಸಂಗ್ರಹಾಲಯ, ಉದ್ಯಾನ, ಸಸ್ಯಶಾಸ್ತ್ರಕ ಉದ್ಯಾನ, ಡೀಷಾûನ್ ವಿಶ್ವವಿದ್ಯಾಲಯ- ಇವು ನಗರದ ಇನ್ನು ಕೆಲವು ಪ್ರಮುಖ ತಾಣಗಳು.
(ಆರ್.ಸಿ.ಎಚ್.)

	ಡೀಷಾನ್ ಕೈಗಾರಿಕಾ ಮತ್ತು ವಾಣಿಜ್ಯಕೇಂದ್ರ. ಉಣ್ಣೆಬಟ್ಟೆ, ಕಸೂತಿ, ಹೊದಿಕೆ, ಚರ್ಮ, ಮದ್ಯ, ಲೋಹಗೆಲಸ, ವಾಹನ, ವಿದ್ಯುದುಪಕರಣ ಮುಂತಾದ ಹಲವು ಕೈಗಾರಿಕೆಗಳಿವೆ. ಮದ್ಯ ತಯಾರಿಕೆಯಲ್ಲಿ ಪ್ರಸಿದ್ಧ. ಇದು ಹಲವು ರಾಷ್ಟ್ರಗಳಿಗೆ ರಫ್ತಾಗುತ್ತದೆ. ಈ ನಗರ ಹಲವು ರಸ್ತೆಗಳ ಸಂಧಿಸ್ಥಳ.

	ಡೀಷಾನಿನ ಹೆಸರು 6ನೆಯ ಶತಮಾನದ ವರೆಗೂ ಕಂಡುಬರುವುದಿಲ್ಲವಾದರೂ ಅದಕ್ಕೂ ಹಿಂದಿನಿಂದಲೂ ಇದು ಬೆಳೆದಿರಬೇಕು; ರೋಮನ್ ಆಕ್ರಮಣದ ಕುರುಹುಗಳು ಅಲ್ಲಲ್ಲಿವೆ. 10ನೆಯ ಶತಮಾನದವರೆಗೂ ಇದು ಬರ್ಗಂಡಿಯ ರಾಜಧಾನಿಯಾಗಿತ್ತು. ಆ ಕಾಲದಲ್ಲಿ ಡ್ಯೂಕ್ ರಾಜನ ಅರಮನೆಯುಳ್ಳ ಸ್ಥಳವಾಗಿತ್ತು. ಎರಡನೆಯ ಡ್ಯೂಕ್ ವಂಶವಾದ ವ್ಯಾಲಾಯ್ ಕಾಲದಲ್ಲಿ (1364-1477) ಇದು ಪ್ರಾಂತ್ಯದ ಮುಖ್ಯಪಟ್ಟಣವಾಯಿತು. ಬರ್ಗಂಡಿ ಫ್ರೆಂಚ್ ದೊರೆಯ ಅಧೀನಕ್ಕೆ ಬಂದಾಗಲೂ ಇದರ ಪ್ರಾಮುಖ್ಯ ಉಳಿಯಿತು. ಫ್ರಾನ್ಸಿನ ಮೇರೆ ವಿಸ್ತರಿಸಿದಾಗ ಇದು ಇನ್ನೂ ಪ್ರಗತಿ ಹೊಂದಿತು. ಫ್ರೆಂಚ್ ಕ್ರಾಂತಿಯಾದಾಗ ಈ ಬೆಳವಣಿಗೆ ತಡೆ ಬಿತ್ತು. 1814-15ರಲ್ಲಿ ಇದು ಆಸ್ಟ್ರಿಯನರ ಆಕ್ರಮಣಕ್ಕೆ ಒಳಗಾಗಿತ್ತು. 1851ರಲ್ಲಿ ಪ್ಯಾರಿಸಿನಿಂದ ಲೈಯನ್ಸಿಗೆ ಇದರ ಮೂಲಕ ರೈಲುಮಾರ್ಗ ನಿರ್ಮಾಣವಾದಾಗ ಮತ್ತೆ ಬೆಳೆಯತೊಡಗಿತು. ಫ್ರಾಂಕೋ-ಜರ್ಮನ್ ಯುದ್ಧದಲ್ಲೂ (1871) ಎರಡನೆಯ ಮಹಾಯುದ್ಧದಲ್ಲೂ ಇದು ಜರ್ಮನರ ವಶವಾಗಿತ್ತು.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ